ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಭಾಗವತೋ ಅಭಿನಂದನಮ್

ಲೇಖಕರು :
ರಾಜ್ ಕುಮಾರ್
ಶುಕ್ರವಾರ, ಜುಲೈ 12 , 2013

ನಮ್ಮ ಮಿತ್ರರ ಅಥವ ನಮ್ಮ ಆತ್ಮೀಯರಲ್ಲಿ ಯಾರೋ ಒಬ್ಬರು ಮದುವೆಯಾಗಲು ಯೋಗ ಕೂಡಿಬರದೆಯೋ ಸಂಗಾತಿಯ ಹೊಂದಾಣಿಕೆಯಾಗದೆಯೋ ಹಲವರ ಮರುಕಕ್ಕೆ ಕಾರಣರಾಗುತ್ತಾರೆ. ಎಲ್ಲಾ ಅರ್ಹತೆ ಇದ್ದು ಮದುವೆಯ ಯೋಗ ಕೂಡದೇ ಇದ್ದಲ್ಲಿ ಏನು ಮಾಡೋಣ? ಮದುವೆಯಾಗಲಿಲ್ಲ ಹೆಣ್ಣು ಅಥವಾ ಗಂಡು ಸಿಗಲಿಲ್ಲ ಎಂದು ಆತ ತನ್ನ ಸ್ವಭಾವ ಬದಲಿಸಿ ಕೆಟ್ಟವನಾಗುವುದಕ್ಕೆ ಸಾಧ್ಯವೇ? ಬಂದದ್ದು ಅನುಭವಕ್ಕೆ ಎಂದು ಪ್ರಾರಭ್ದದ ಹಾದಿಯನ್ನು ಸವೆಸುತ್ತಾ ಬದುಕುವುದು ರೂಢಿ. ಆದರೆ ಅಂಥವನು ಒಂದು ದಿನ ತನ್ನ ಮದುವೆ ಆಮಂತ್ರಣ ಹಿಡಿದು ಕೈ ಮುಂದೆ ಒಡ್ದಿದಾಗ ಕಿರುನಗುವೊಂದು ಬರದೆ ಉಳಿಯಲು ಸಾಧ್ಯವೇ?

ಪುತ್ತಿಗೆ ರಘುರಾಮ ಹೊಳ್ಳ
ಆ ಆಮಂತ್ರಣ ಓದುತ್ತಿದ್ದಂತೆ ಸಂಭ್ರಮಿಸುವ ಮನಸ್ಸಾಗುತ್ತದೆ. ಮದುವೆಯ ದಿನಾಂಕ ನೋಡಿ ತಮ್ಮ ಪುರುಸೊತ್ತನ್ನು ಲೆಕ್ಕ ಹಾಕುತ್ತದೆ ನಮ್ಮ ಮನಸ್ಸು. ಇತ್ತೀಚೆಗೆ “ ರಘುರಾಮಾಭಿನಂದನಮ್” ಎಂಬ ಆಮಂತ್ರಣದ ಕರೆಯೋಲೆ ನೋಡಿದಾಗಲೂ ಇದೇ ಭಾವ ಸುಳಿದುದಕ್ಕೆ ಅಚ್ಚರಿ ಪಡಬೇಕೋ ತಿಳಿಯದು. ಯಾಕೆಂದರೆ ಯಕ್ಷಗಾನದ ತಮ್ಮ ಪ್ರತಿಭೆಯಿಂದ ಹಿರಿಯ ದೈತ್ಯ ಭಾಗವತ ಅಂತಲೇ ಹೇಳಬಹುದು ಶ್ರೀ ಪುತ್ತಿಗೆ ರಘುರಾಮ ಹೊಳ್ಳರು ಸನ್ಮಾನಿಸಲ್ಪಡುತ್ತಾರೆ ಎಂದಾಗ ಮುಖದಲ್ಲಿ ಕಿರುನಗುವೊಂದು ಮೂಡದೇ ಇದ್ದರೆ, ಅವರ ಹಾಡುಗಾರಿಕೆಗೆ ಕೈಚಪ್ಪಾಳೆ ತಟ್ಟಿದುದಕ್ಕೆ ಅರ್ಥಉಂಟೇ?

ತನ್ನ ಪ್ರತಿಭೆಗೆ ತಾನೇ ಬೆನ್ನು ತಟ್ಟಿಕೊಳ್ಳುವುದು., ತನಗೆ ಪ್ರಶಸ್ತಿಗಾಗಿ ತಾನೇ ಅರ್ಜಿಗುಜರಾಯಿಸಿ ವ್ಯವಹಾರ ಕುದುರಿಸುವುದು. ತನ್ನ ಕಲಾಪ್ರೋತ್ಸಾಹಕ್ಕೆ ತಾನೇ ಗುಂಪು ಕಟ್ಟಿ ಚಪ್ಪಾಳೆ ಹೊಡೆಸುವುದು...ಇದೆಲ್ಲ ಇಂದಿನ ಕಲಾ ಪ್ರಪಂಚದಲ್ಲಿ ಸಾಮಾನ್ಯವಾಗುವ ಅಂಶ. ಒಂದೆರಡು ರಾಗ ಕಲಿತವನು ವಾಸ್ತವದಲ್ಲಿ ಅದೂ ದೊಡ್ಡ ಸಾಧನೆಯೇ. ಆದರೂ ಒಂದೆರಡು ರಾಗ ಪಾಂಡಿತ್ಯಕ್ಕೆ ಗಾನ ಗಂಧರ್ವನೋ ಗಾನ ಕೋಗಿಲೆಯೋ ಆಗಿ ಸಪ್ತಾಹ ಆಚರಿಸಿ ಶಾಲು ಹೊದೆಸಿಕೊಳ್ಳುವುದು ಇದೆಲ್ಲ ಒಂದು ಸಾಮಾರ್ಥ್ಯಕ್ಕೆ ನಿದರ್ಶನವಾಗುತ್ತದೆ.

ಒಂದು ಸಿನಿಮಾದಲ್ಲಿ ನಟಿಸಿದ ಕೂಡಲೇ (ಸಖತ್ತಾಗಿ ಫೈಟಿಂಗ್ ಸಾಂಗುಗಳಲ್ಲಿ) ಮಿಂಚಾಗುತ್ತಾನೆ. ಯಾವುದೋ ಒಂದು ಸ್ಟಾರ್ ಬಿರುದು ಅದೂ ಕನ್ನಡ ನಟನಿಗೆ ಬಂದು ಬಿಡುತ್ತದೆ. ಹುಚ್ಚು ಕುರುಡು ಅಭಿಮಾನ ಹೆಚ್ಚಿಸುವುದೇ ಆ ನಟನ ವ್ಯವಹಾರ ಕುಶಲತನಕ್ಕೆ ನಿದರ್ಶನವಾಗುತ್ತದೆ. ಹಾಗೆ ಅಭಿಮಾನ ಹೆಚ್ಚಿದಂತೆ ಆತನ ಕಾಲ್ ಶೀಟ್ ಸಂಭಾವನೆ ಕೂಡ ಹೆಚ್ಚುತ್ತಾ ಸಾಗುತ್ತದೆ. ಇದಕ್ಕೆ ಅವನ ಭಂಡವಾಳ ಏನೂ ಇರುವುದಿಲ್ಲ. ಈ ನಡುವೆ ಹೆಚ್ಚಿದ ಸಂಭಾವನೇ ಕೂಡ ಒಂದು ಮಾನದಂಡ (ಮಾನವೇ ದಂಡ) ವಾಗಿರುತ್ತದೆ. ಪರೋಕ್ಷವಾಗಿ ನಿರ್ಮಿಸುವ ಸಿನಿಮಾ ಬಜೆಟ್ ಕೂಡ ಹೆಚ್ಚುತ್ತದೆ. ಈ ಮಧ್ಯೆ ಬಡ ಪ್ರೇಕ್ಷಕ ಮಾತ್ರ ತನ್ನ ಕಿರು ಸಂಪಾದನೆಯಿಂದ ಟಿಕೆಟ್ ತೆಗೆದು ಈ ಬಜೆಟ್ ನ್ನು ತುಂಬಿಸುತ್ತಾನೆ. ಪರೋಕ್ಷವಾಗಿ ನಟನ ಐಷಾರಾಮಿ ಜೀವನದ ಪಲ್ಲಂಗ ಸುಖಕ್ಕೆ ಈತ ಕಷ್ಟ ಪಟ್ಟು ದುಡಿದ ಚಿಕ್ಕಾಸು ದೇಣಿಗೆಯಾಗಿ ಸಲ್ಲುವುದು ಪ್ರೇಕ್ಷಕನ ಅರಿವಿಗೇ ಬರುವುದಿಲ್ಲ. ಈತ ಸ್ಟಾರ್ ಗಿರಿ ಕೊಟ್ಟು ಅತನನ್ನು ಮೇಲಕ್ಕೆ ಏರಿಸಿಯಾಗಿಬಿಟ್ಟಿದೆ. ಇದಕ್ಕೆ ಕಲಾ ಸೇವೆಯ ಲೇಬಲ್ ಬೇರೆ. ಯಾವೋಬ್ಬ ನಟನೂ ತನ್ನ ಅಭಿಮಾನಿಗಾಗಿ ಸಂಭಾವನೆ ಇಲ್ಲದೇ ನಟಿಸಿದ ದೃಷ್ಟಾಂತ ಇದೆಯೇ?

ಪುತ್ತಿಗೆ ರಘುರಾಮ ಹೊಳ್ಳ (ಎಡ ಬದಿಯಲ್ಲಿರುವವರು) ಭಾರತದ ಭಾರತದ ಮಾಜಿ ರಾಷ್ತ್ರಪತಿ ಶ್ರೀ ಶ೦ಕರ ದಯಾಳ್ ಶರ್ಮರವರೊದಿಗೆ.


ಈಗಿನ ಕಲಾ ಪ್ರಪಂಚ ವ್ಯಾಪಾರೀ ಮಯವಾಗಿದೆ ಕೇವಲ ಕಲಾಸಂಪತ್ತು ಮಾತ್ರ ಇದ್ದರೆ ಸಾಲದು ವ್ಯವಹಾರ ಕುಶಲಿಗಳೂ ಆಗಿರಬೇಕು. ಈಗಿನ ಕಲಾಪ್ರಪಂಚ ಎಂದರೆ, ಮೊದಲು ಊರಿನ ಗೋಳಿ ಮರದ ಅಡಿಯಲ್ಲಿ ಆಗುವ ವಾರದ ಸಂತೆಯನ್ನು ಜ್ಞಾಪಕಕ್ಕೆ ತರುತ್ತದೆ. ಸಂತೆಯಲ್ಲಿ ಹೇಗೆ? ತನ್ನಲ್ಲಿದ್ದ ವಸ್ತುವಿಗೆ ಗ್ರಾಹ್ಯ ಗುಣವಿಲ್ಲದೇ ಇದ್ದರೂ ಅದನ್ನು ತುಂಬಿಸಿ, ಅದಕ್ಕೆ ಬೇಡಿಕೆಯನ್ನು ಸೃಷ್ಟಿಸಬಲ್ಲವನು ನಿಜವಾದ ವ್ಯವಹಾರ ಕುಶಲಿ ವ್ಯಾಪಾರಿಯಾಗುತ್ತಾನೆ. ಬೇಡಿಕೆ ಕೃತ್ರಿಮದ್ದಾದರೂ ವ್ಯಾಪಾರ ಲಾಭದಾಯಕವಾಗಿರುತ್ತದೆ. ಅದೇ ಅಲ್ಲವೇ ಆಗಬೇಕಾದದ್ದು. ವ್ಯಾಪಾರ ಎನ್ನುವುದೇ ಅದಕ್ಕೆ. ಇಲ್ಲಿ ಎಲ್ಲ ಪ್ರಯೋಗಗಳೂ ಸಹಜ ಮತ್ತು ನ್ಯಾಯಯುತವಾದದ್ದು ಎನಿಸಲ್ಪಡುತ್ತದೆ. ಆದರೆ ಕಲಾ ಪ್ರಪಂಚದಲ್ಲೂ ಇದೇ ಸಹಜವಾದಾಗ ನಿಜವಾಗಿ ಕಲಾಸ್ವಾದಿ ನೈಜ ಕಲೆ ಮರೆಗೆ ಸರಿದಂತೆ ತಾನು ಮರೆಗೆ ಸರಿಯುತ್ತಾನೆ.

ಹೊಳ್ಳಣ್ಣನಿಗೆ ಸನ್ಮಾನ ಆಗುವುದೇ ಅಪರೂಪ. ಬಹಶಃ ಮಳೆ ಬಾರದೆ ಮೋಡ ಕಪ್ಪಾಗಿ ಕಪ್ಪಾಗಿ ಗಾಳಿಯ ರಭಸಕ್ಕೆ ಎಲ್ಲೋ ಹೋದಂತೆ ಮತ್ತೊಂದು ದಿನ ಇದ್ದಕ್ಕಿದ್ದಂತೆ ಯಾವುದೇ ಸೂಚನೆಇಲ್ಲದೇ ಧೋ ಎಂದು ಮೇಘವರ್ಷವಾದರೆ...? ಹಾಗೆ ಎಂತಹ ಸನ್ಮಾನ ನೋಡಿ ಮೂರು ದಿನ ಅತ್ಯಂತ ವಿಭವದಲ್ಲಿ ವೈವಿಧ್ಯಮಯ ಸನ್ಮಾನ ಕಾರ್ಯಕ್ರಮ. ಅದು ಯಕ್ಷಗಾನ ಕೇಂದ್ರವಾದ ಮಂಗಳೂರು ಪುರಭವನದಲ್ಲಿ.ನಿಜಕ್ಕೂ ಇದು ಶ್ಲಾಘನೀಯ ಕಾರ್ಯಕ್ರಮ. ಮಿತ್ರನ ಮದುವೆಗೆ ಹೋಗಲಿಕ್ಕೆ ಆಗುತ್ತದೋ ಇಲ್ಲವೋ ಬೇರೆ ಮಾತು.. ಆದರೆ ಮದುವೆ ಅಗ್ತ್ತದಲ್ಲ ಅದಕ್ಕಿಂತ ಸಂತೋಷ ಬೇರೆ ಇರದು.

ಪುತ್ತಿಗೆ ರಘುರಾಮ ಹೊಳ್ಳ, ಮಡದಿ ವಾಣಿ, ಪುತ್ರಿಯರು ಶ್ರೀಲಕ್ಷ್ಮೀ ಮತ್ತು ಶ್ರೀವಿದ್ಯಾ .


ಹೊಳ್ಳಣ್ಣ ಯಕ್ಷಗಾನ ಕಂಡ ಅದ್ಭುತ ಭಾಗವತ. ದೈತ್ಯ ಕಂಠದ ದೈತ್ಯ ಪ್ರತಿಭೆಯ ಕಿರು ಶರೀರದ ಭಾಗವತ. ಹಲವು ಸಲ ರಂಗಸ್ಥಳದ ಸಿಂಹಾಸನದ ಹಿಂದೆ ಇವರು ಕಾಣುವುದೇ ಇಲ್ಲವೇನೋ ಎನ್ನಿಸಿದರು ಹೊರ ಹೊಮ್ಮುವ ಏರು ಶ್ರುತಿಯ ಸ್ವರ ಮಾತ್ರ ಅದ್ಭುತ ಎನಿಸಲ್ಪಡುತ್ತದೆ. ಅದು ಕಂಠದ ಪೂರ್ಣ ಸಾಮಾರ್ಥ್ಯಕ್ಕೆ ಸವಾಲು ಹಾಕಿದ ಹಾಗಿರುವ ಸ್ವರ. ಇಷ್ಟಾದರೂ ಸಲೀಸಾದ ಮುಖಭಾವ. ಸಹಕಲಾವಿದರನ್ನು ಪ್ರಚೋದಿಸುವ ಹಾವಭಾವ. ಎಲ್ಲೇಲ್ಲಿಯೋ ನೋಡಿ ಮಾತಾಡಿ ವಾಹನ ಚಲಾಯಿಸಿದರೂ ವಾಹನ ರಸ್ತೆಯಲ್ಲಿ ಸುರಕ್ಷಿತವಾಗಿ ಸಾಗಿದಂತೆ ಇರುವ ಗಾಯನ ಶೈಲಿ ನಿಜಕ್ಕೂ ಅದ್ಭುತ ಪ್ರತಿಭೆ. ತಾಳ ಬಡಿಯದೇ ಇದ್ದರೂ ಶೂನ್ಯವಾಗಿ ಇದ್ದ ತಾಳ ಧುತ್ತನೇ ಪ್ರತ್ಯಕ್ಷವಾದ ಹಾಗೆ ಇರುವ ಲಯಶುದ್ದಿ. ಇದು ಕೇವಲ ಪ್ರತಿಭೆ ಮಾತ್ರ ಇದ್ದರೆ ಸಾಲದು ಸಾಧನೆಯೂ ಬೇಕಾಗುತ್ತದೆ. ಈ ಮಟ್ಟಿಗೆ ಹೊಳ್ಳರದ್ದು ಅದ್ವಿತೀಯ ಸಾಧನೆ. ಪದ ಹೇಳುತ್ತಾ ಪಕ್ಕದವರೋಂದಿಗೇ ಕೈಸನ್ನೇ ಕಣ್ಸನ್ನೇಯಲ್ಲಿ ಮಾತನಾಡುತ್ತಾ ನಂತರದ ಚರಣವನ್ನು ಅದೇ ವೇಗದಲ್ಲಿ ಅದೇ ಲಯದಲ್ಲಿ ತೆಗೆಯುತ್ತಾರೆ. ಅದು ಎಷ್ಟು ಸಲೀಸು...? ಅಚ್ಚರಿಯಾಗದೇ ಇರಲು ಸಾಧ್ಯವೇ?

ಅರ್ಜಿ ಗುಜರಾಯಿಸದೇ ಪಾಠ ಒಪ್ಪಿಸದೇ ಖಾಸಗಿಯಾಗಿ ಅಭಿಮಾನಿಗಳಿಂದ ಸಿಗುವ ಸ್ವಯಂಪ್ರೇರಿತ ಸನ್ಮಾನ, ಕಲಾವಿದನೆನ್ನಿಸಿಕೊಂಡವನಿಗೆ ಬಹಳ ಮೌಲ್ಯವನ್ನು ತರುತ್ತದೆ. ಇಲ್ಲಿ ಯಾವ ವಶೀಲಿಯಾಗಲೀ ಯಾವುದೇ ಅಂಧಾಭಿಮಾನವಿಲ್ಲದೆ ಅಪ್ಪಟ ಅಭಿಮಾನದಿಂದ ಸನ್ಮಾನ ನಡೆಯುತ್ತಿದ್ದರೆ ಅದಕ್ಕೆ ನಮ್ಮ ಹೊಳ್ಳಣ್ನನಷ್ಟು ಅರ್ಹವ್ಯಕ್ತಿ ಬೇರೆ ಇಲ್ಲ.

ನಮ್ಮ ಹೊಳ್ಳಣ್ಣನಿಗೆ ಶುಭ ಹಾರೈಕೆಗಳನ್ನು ಹಾರೈಸುತ್ತಾ ಸಂಭ್ರಮದಿಂದ ಸನ್ಮಾನಿಸುವ ಕಲಾಭಿಮಾನಿಗಳಿಗೆ ಈ ಮೂಲಕ ಶುಭ ಹಾರೈಕೆಗಳನ್ನು ಹಾರೈಸುತ್ತೇನೆ.

ಕೃಪೆ : http://yakshachintana.blogspot.in


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ